ಕಪ್ಪುಹಣ ಘೋಷಿಸಲು ಹೊಸದಾಗಿ ಜಾರಿಗೆ ತಂದಿರುವ ಯೋಜನೆ, ಸೋಮವಾರ ಮಾದ್ಯಮಗಳಲ್ಲಿ ಜಾಹೀರಾತು ನೀಡಿರುವ ತೆರಿಗೆ ಇಲಾಖೆ, ಕಪ್ಪುಹಣ ಘೋಷಿಸಿಕೊಳ್ಳುವ ಮೂಲಕ ಸ್ವತ್ಛರಾಗಿ ಹೊರಬರಲು ಕಡೆಯ ಅವಕಾಶ ಎಂದು ಹೇಳಿದೆ.
"ವಿದೇಶದಲ್ಲಿ ಭಾರತೀಯರು ಇಟ್ಟಿರುವ ಕಪ್ಪುಹಣದ ಬಗ್ಗೆ ನಮ್ಮ ಬಳಿ ಮಾಹಿತಿ ಇದೆ. ಹೀಗಾಗಿ ಸೆ.30ರೊಳಗೆ ಕಪ್ಪುಹಣದ ಕುರಿತು ಮಾಹಿತಿ ಬಹಿರಂಗ ಮಾಡುವುದು ಒಳಿತು. ಇಲ್ಲದೇ ಹೋದಲ್ಲಿ ಪತ್ತೆಯಾದ ಹಣದ ಶೇ.120ರಷ್ಟನ್ನು ತೆರಿಗೆ ಮತ್ತು ದಂಡದ ರೂಪದಲ್ಲಿ ಕಟ್ಟಬೇಕಾಗುತ್ತದೆ. ಗರಿಷ್ಠ 10 ವರ್ಷಗಳವರೆಗೆ ಜೈಲು ಶಿಕ್ಷೆಯಾಗುವ ಸಾಧ್ಯತೆ ಇರುತ್ತದೆ. ಅಲ್ಲದೆ ಅಕ್ರಮ ಹಣ ವರ್ಗಾವಣೆ ವಿಚಾರಣೆ ಎದುರಿಸಬೇಕಾಗುತ್ತದೆ' ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.
ಒಂದು ವೇಳೆ ಸೆ.30ರೊಳಗೆ ಕಪ್ಪುಹಣದ ಕುರಿತು ಘೋಷಣೆ ಮಾಡಿದರೆ, ಘೋಷಣೆ ಮಾಡಿದ ಮೊತ್ತಕ್ಕೆ ಶೇ.30ರಷ್ಟು ತೆರಿಗೆ ಮತ್ತು ಶೇ.30ರಷ್ಟು ದಂಡ ಕಟ್ಟಿದರೆ ಸಾಕು. ಅವರ ವಿರುದ್ಧ ಯಾವುದೇ ಕೇಸು ದಾಖಲಿಸುವುದಿಲ್ಲ.
ಸಚಿವರಿಗೆ ಲಂಚ: ತನಿಖೆಗೆ ಆದೇಶ
ಪಣಜಿ: ನೀರಾವರಿ ಸಂಬಂಧಿ ಯೋಜನೆಯೊಂದರ ಗುತ್ತಿಗೆ ಪಡೆಯಲು ಅಮೆರಿಕ ಮೂಲದ ಕಂಪನಿಯೊಂದು, ಗೋವಾದ ಸಚಿವರಿಗೆ ಲಂಚ ನೀಡಿತ್ತು ಎಂಬ ಆರೋಪದ ಕುರಿತಂತೆ ಗೋವಾ ಕ್ರೈಂ ಬ್ರ್ಯಾಂಚ್ ಪೊಲೀಸರು ಪ್ರಾಥಮಿಕ ತನಿಖೆ ನಡೆಸಲಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪಾರ್ಶೇಕರ್, "ಮೊದಲು ರಾಜ್ಯ ಪೊಲೀಸರಿಂದ ತನಿಖೆ ನಡೆಸಲು ಆದೇಶಿಸಲಾಗಿದೆ. ಬಳಿಕ ಈ ವರದಿಯನ್ನು ಆಧಾರವಾಗಿಟ್ಟುಕೊಂಡು ಸಿಬಿಐ ತನಿಖೆಗೆ ಮನವಿ ಮಾಡಲಾಗುವುದು' ಎಂದು ತಿಳಿಸಿದ್ದಾರೆ. ಆದರೆ ಆರೋಪವನ್ನು ಅಂದಿನ ಸಿಎಂ ದಿಗಂಬರ ಕಾಮತ್, ಮಾಜಿ ಸಚಿವ ಚರ್ಚಿಲ್ ಅಲೆಮಾವೋ ನಿರಾಕರಿಸಿದ್ದಾರೆ.
ವಿದೇಶಿ ಲಂಚಕ್ಕೆ ಕಡಿವಾಣ: ಮಸೂದೆ
ನವದೆಹಲಿ: ಜಲ ಅಭಿವೃದ್ಧಿ ಯೋಜನೆಗಳ ಗುತ್ತಿಗೆಯನ್ನು ಹಾಕಿಕೊಳ್ಳುವ ಸಲುವಾಗಿ ಅಮೆರಿಕದ ಕಂಪನಿಯೊಂದು ಗೋವಾದ ಮಾಜಿ ಸಚಿವರಿಗೆ ಲಂಚ ಕೊಟ್ಟ ವಿಷಯ ಬಯಲಾದ ಬೆನ್ನಲ್ಲೇ, ವಿದೇಶೀಯರಿಗೆ ಲಂಚ ನೀಡುವುದು ಮತ್ತು ವಿದೇಶೀಯರಿಂದ ಲಂಚ ಸ್ವೀಕರಿಸುವುದು ಅಪರಾಧ ಕೃತ್ಯ ಎಂದು ಪರಿಗಣಿಸುವ ಹೊಸ ಮಸೂದೆಯನ್ನು ಸಂಸತ್‌ನಲ್ಲಿ ಮಂಡಿಸಲು ಚಿಂತನೆ ನಡೆಸಿದೆ. ವಿದೇಶೀಯರಿಗೆ ಲಂಚ ಕೊಟ್ಟ ಅಥವಾ ಸ್ವೀಕರಿಸಿದ ಅಪರಾಧಕ್ಕೆ 7 ವರ್ಷ ಜೈಲು ಶಿಕ್ಷೆ ವಿಧಿಸುವುದು ಸೇರಿ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳುವ ಅಂಶಗಳು ಹೊಸ ಕಾಯಿದೆಯಲ್ಲಿದೆ. ಹಿಂದಿನ ಯುಪಿಎ ಸರ್ಕಾರ ರಚಿಸಿದ್ದ ಕಾನೂನು 15ನೇ ಲೋಕಸಭೆ ವಿಸರ್ಜನೆಯಾಗುವುದರೊಂದಿಗೆ ಅನೂರ್ಜಿತಗೊಂಡಿತ್ತು