Tuesday, 21 July 2015

indian black money report


ನವದೆಹಲಿ: ವಿದೇಶಗಳಲ್ಲಿ ಅಕ್ರಮ ಅಸ್ತಿ ಹೊಂದಿದವರು, ಈ ಕುರಿತು ಸೆ.30ರೊಳಗೆ ಸರ್ಕಾರಕ್ಕೆ ಮಾಹಿತಿ ನೀಡದೇ ಹೋದಲ್ಲಿ ಭಾರೀ ಕಠಿಣ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಸರ್ಕಾರ ಮತ್ತೂಮ್ಮೆ ಎಚ್ಚರಿಕೆ ನೀಡಿದೆ.
ಕಪ್ಪುಹಣ ಘೋಷಿಸಲು ಹೊಸದಾಗಿ ಜಾರಿಗೆ ತಂದಿರುವ ಯೋಜನೆ, ಸೋಮವಾರ ಮಾದ್ಯಮಗಳಲ್ಲಿ ಜಾಹೀರಾತು ನೀಡಿರುವ ತೆರಿಗೆ ಇಲಾಖೆ, ಕಪ್ಪುಹಣ ಘೋಷಿಸಿಕೊಳ್ಳುವ ಮೂಲಕ ಸ್ವತ್ಛರಾಗಿ ಹೊರಬರಲು  ಕಡೆಯ ಅವಕಾಶ ಎಂದು ಹೇಳಿದೆ.
"ವಿದೇಶದಲ್ಲಿ ಭಾರತೀಯರು ಇಟ್ಟಿರುವ ಕಪ್ಪುಹಣದ ಬಗ್ಗೆ ನಮ್ಮ ಬಳಿ ಮಾಹಿತಿ ಇದೆ. ಹೀಗಾಗಿ ಸೆ.30ರೊಳಗೆ ಕಪ್ಪುಹಣದ ಕುರಿತು ಮಾಹಿತಿ ಬಹಿರಂಗ ಮಾಡುವುದು ಒಳಿತು. ಇಲ್ಲದೇ ಹೋದಲ್ಲಿ ಪತ್ತೆಯಾದ ಹಣದ ಶೇ.120ರಷ್ಟನ್ನು ತೆರಿಗೆ ಮತ್ತು ದಂಡದ ರೂಪದಲ್ಲಿ ಕಟ್ಟಬೇಕಾಗುತ್ತದೆ. ಗರಿಷ್ಠ 10 ವರ್ಷಗಳವರೆಗೆ ಜೈಲು ಶಿಕ್ಷೆಯಾಗುವ ಸಾಧ್ಯತೆ ಇರುತ್ತದೆ. ಅಲ್ಲದೆ ಅಕ್ರಮ ಹಣ ವರ್ಗಾವಣೆ  ವಿಚಾರಣೆ ಎದುರಿಸಬೇಕಾಗುತ್ತದೆ' ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.
ಒಂದು ವೇಳೆ ಸೆ.30ರೊಳಗೆ ಕಪ್ಪುಹಣದ ಕುರಿತು ಘೋಷಣೆ ಮಾಡಿದರೆ, ಘೋಷಣೆ ಮಾಡಿದ ಮೊತ್ತಕ್ಕೆ ಶೇ.30ರಷ್ಟು ತೆರಿಗೆ ಮತ್ತು ಶೇ.30ರಷ್ಟು ದಂಡ ಕಟ್ಟಿದರೆ ಸಾಕು. ಅವರ ವಿರುದ್ಧ ಯಾವುದೇ ಕೇಸು ದಾಖಲಿಸುವುದಿಲ್ಲ.
ಸಚಿವರಿಗೆ ಲಂಚ: ತನಿಖೆಗೆ ಆದೇಶ
ಪಣಜಿ: ನೀರಾವರಿ ಸಂಬಂಧಿ ಯೋಜನೆಯೊಂದರ ಗುತ್ತಿಗೆ ಪಡೆಯಲು ಅಮೆರಿಕ ಮೂಲದ ಕಂಪನಿಯೊಂದು, ಗೋವಾದ ಸಚಿವರಿಗೆ ಲಂಚ ನೀಡಿತ್ತು ಎಂಬ ಆರೋಪದ ಕುರಿತಂತೆ ಗೋವಾ ಕ್ರೈಂ ಬ್ರ್ಯಾಂಚ್‌ ಪೊಲೀಸರು ಪ್ರಾಥಮಿಕ ತನಿಖೆ ನಡೆಸಲಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಮುಖ್ಯಮಂತ್ರಿ ಲಕ್ಷ್ಮೀಕಾಂತ್‌ ಪಾರ್ಶೇಕರ್‌, "ಮೊದಲು ರಾಜ್ಯ ಪೊಲೀಸರಿಂದ ತನಿಖೆ ನಡೆಸಲು ಆದೇಶಿಸಲಾಗಿದೆ. ಬಳಿಕ ಈ ವರದಿಯನ್ನು ಆಧಾರವಾಗಿಟ್ಟುಕೊಂಡು ಸಿಬಿಐ ತನಿಖೆಗೆ ಮನವಿ ಮಾಡಲಾಗುವುದು' ಎಂದು ತಿಳಿಸಿದ್ದಾರೆ. ಆದರೆ ಆರೋಪವನ್ನು ಅಂದಿನ ಸಿಎಂ ದಿಗಂಬರ ಕಾಮತ್‌, ಮಾಜಿ ಸಚಿವ ಚರ್ಚಿಲ್‌ ಅಲೆಮಾವೋ ನಿರಾಕರಿಸಿದ್ದಾರೆ.
ವಿದೇಶಿ ಲಂಚಕ್ಕೆ ಕಡಿವಾಣ: ಮಸೂದೆ
ನವದೆಹಲಿ: ಜಲ ಅಭಿವೃದ್ಧಿ ಯೋಜನೆಗಳ ಗುತ್ತಿಗೆಯನ್ನು  ಹಾಕಿಕೊಳ್ಳುವ ಸಲುವಾಗಿ ಅಮೆರಿಕದ ಕಂಪನಿಯೊಂದು ಗೋವಾದ ಮಾಜಿ ಸಚಿವರಿಗೆ ಲಂಚ ಕೊಟ್ಟ ವಿಷಯ ಬಯಲಾದ ಬೆನ್ನಲ್ಲೇ, ವಿದೇಶೀಯರಿಗೆ ಲಂಚ ನೀಡುವುದು ಮತ್ತು ವಿದೇಶೀಯರಿಂದ ಲಂಚ ಸ್ವೀಕರಿಸುವುದು ಅಪರಾಧ ಕೃತ್ಯ ಎಂದು ಪರಿಗಣಿಸುವ ಹೊಸ ಮಸೂದೆಯನ್ನು ಸಂಸತ್‌ನಲ್ಲಿ ಮಂಡಿಸಲು ಚಿಂತನೆ ನಡೆಸಿದೆ. ವಿದೇಶೀಯರಿಗೆ ಲಂಚ ಕೊಟ್ಟ ಅಥವಾ ಸ್ವೀಕರಿಸಿದ ಅಪರಾಧಕ್ಕೆ 7 ವರ್ಷ ಜೈಲು ಶಿಕ್ಷೆ ವಿಧಿಸುವುದು ಸೇರಿ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳುವ ಅಂಶಗಳು ಹೊಸ ಕಾಯಿದೆಯಲ್ಲಿದೆ. ಹಿಂದಿನ ಯುಪಿಎ ಸರ್ಕಾರ ರಚಿಸಿದ್ದ ಕಾನೂನು 15ನೇ ಲೋಕಸಭೆ ವಿಸರ್ಜನೆಯಾಗುವುದರೊಂದಿಗೆ ಅನೂರ್ಜಿತಗೊಂಡಿತ್ತು

ಮೋದಿ ಹಿಟ್ಲರ್‌ ಇದ್ದಂತೆ: ಮುಂಬೈ ಮೇಯರ್‌


ಮುಂಬೈ: ಶಿವಸೇನೆ ನಾಯಕಿ ಮುಂಬಯಿ ಮೇಯರ್‌ ಸ್ನೇಹಲ್‌ ಅಂಬೇಕರ್‌ ಅವರು ಪ್ರಧಾನಿ ಮೋದಿ ಅವರನ್ನು ಜರ್ಮನಿಯ ಮಾಜಿ ನಾಜಿ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್‌ಗೆ ಹೋಲಿಸಿ ವಿವಾದಕ್ಕೀಡಾಗಿದ್ದಾರೆ.
ಮೊದಲ ದಲಿತ ಮೇಯರ್‌ ಆಗಿ ಕಳೆದ ವರ್ಷ ಅಧಿಕಾರ ಸ್ವೀಕರಿಸಿದ ಅಂಬೇಕರ್‌ ಅವರು "ಆಫ್ಟರ್‌ನೂನ್‌ ಡಿಸ್‌ಪ್ಯಾಚ್‌ ಮತ್ತು ಕೊರಿಯರ್‌' ದಿನಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ "ಮೋದಿ ಆಡಳಿತವು ಹೆಚ್ಚು ಕಡಿಮೆ ಹಿಟ್ಲರ್‌ ಆಡಳಿತದಂತೆ ಇದೆ' 
"ನಾನು ಮೋದಿ ಅವರ ಆತ್ಮಾವಲಂಬಿ ಶೈಲಿಯ ಕೆಲಸಗಳನ್ನು ಗೌರವಿಸುತ್ತೇನೆ. ಆದರೂ, ಮೋದಿ ಅವರ ಆಡಳಿತ ಹೆಚ್ಚು -ಕಮ್ಮಿ ಹಿಟ್ಲರ್‌ನಂತಿದೆ ಎನ್ನುವುದು ನನ್ನ ಅಭಿಪ್ರಾಯ. ಒಂದೇ ವ್ಯಕ್ತಿಯ ಕಡೆಗೆ ಅಧಿಕಾರವು ಕೇಂದ್ರೀಕೃತವಾಗಿರುವಾಗ ಇಂಥ ಅಭಿಪ್ರಾಯಗಳು ಹುಟ್ಟುವುದು ಸಾಮಾನ್ಯ' ಎಂದು ಅಂಬೇಕರ್‌ ಅವರು ಹೇಳಿದ್ದಾರೆ. "ಬಾಳಾ ಠಾಕ್ರೆ ಅವರನ್ನು ಹೊರತುಪಡಿಸಿದಂತೆ ಬೇರೆ ಯಾರನ್ನು ನೀವು ಗೌರವಿಸುತ್ತೀರಿ?' ಎಂಬ ಪ್ರಶ್ನೆಗೆ ಅಂಬೇಕರ್‌ ಈ ರೀತಿ ಹೇಳಿದರು

ದೇಶದ ಮೊದಲ ಬುಲೆಟ್‌ ರೈಲು ಯೋಜನೆಗೆ 1ಲಕ್ಷ ಕೋಟಿ ಜೆಐಸಿಎ


ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ , ಮುಂಬೈ-ಅಹಮದಾಬಾದ್‌  ದೇಶದ ಮೊತ್ತ ಮೊದಲ ಬುಲೆಟ್‌ ರೈಲು ಯೋಜನೆಯ ಕುರಿತ  ವರದಿ ಸಲ್ಲಿಕೆಯಾಗಿದೆ.
ಯೋಜನೆ ಬಗ್ಗೆ ಜಪಾನಿನ ದಿ ಜಪಾನ್‌ ಇಂಟರ್‌ನ್ಯಾಷನಲ್‌ ಕಾಪರೇಷನ್‌ ಏಜೆನ್ಸಿ (jisc) ಅಧ್ಯಯನ ನಡೆಸಿದ್ದು ಯೋಜನೆಗಾಗಿ 98,805 ಕೋಟಿ ರೂ. ಬೇಕಾಗಲಿದೆ ಎಂದು ಅಂದಾಜು ಮಾಡಲಾಗಿದೆ.
ಬುಲೆಟ್‌ ರೈಲು ಯೋಜನೆ ವರದಿಯನ್ನು ಭಾರತದ ಜಪಾನ್‌ ರಾಯಭಾರಿ ತಾಕೇಶಿ  ಅವರ ನೇತೃತ್ವದಲ್ಲಿ ಜೆಐಸಿಎ ಅಧಿಕಾರಿಗಳ ನಿಯೋಗ ರೈಲ್ವೇ ಸಚಿವ ಸುರೇಶ್‌ ಪ್ರಭು ಅವರಿಗೆ ಸೋಮವಾರ ನೀಡಿದೆ.
2 ತಾಸು ಪ್ರಯಾಣ: ಒಂದೊಮ್ಮೆ ಬುಲೆಟ್‌ ರೈಲು ಯೋಜನೆ ಪೂರ್ಣವಾಗಿ ಮುಕ್ತಾಯಗೊಂಡರೆ, ಮುಂಬೈ-ಅಹಮದಾಬಾದ್‌ ನಡುವಿನ 505 ಕಿ.ಮೀ. ದೂರವನ್ನು ಕೇವಲ 2 ಗಂಟೆಗಳಲ್ಲಿ ಕ್ರಮಿಸಬಹುದಾಗಿದೆ. ಸದ್ಯ ಈ ದೂರವನ್ನು ಕ್ರಮಿಸಲು 7 ಗಂಟೆ ಸಮಯ ಬೇಕಾಗುತ್ತದೆ. ಗಂಟೆಗೆ 300 ಕಿ.ಮೀ. ವೇಗದಲ್ಲಿ ಈ ರೈಲು ಸಂಚರಿಸಲಿದೆ. ಇದರೊಂದಿಗೆ ಇದರ ಟಿಕೆಟ್‌ ಬೆಲೆಯೂ ರಾಜಧಾನಿ ಎಕ್ಸ್‌ಪ್ರೆಸ್‌ನ ಫ‌ಸ್ಟ್‌ ಎಸಿ ಟಿಕೆಟ್‌ ಬೆಲೆಗಿಂತ ಹೆಚ್ಚಿಗಿರಲಿದ್ದು ಸುಮಾರು 2800 ರೂ.ಗಳಷ್ಟಾಗಲಿದೆ.
ಸದ್ಯ ಬುಲೆಟ್‌ ರೈಲು ವರದಿಯನ್ನು ರೈಲ್ವೇ ಇಲಾಖೆ ಪರಾಮರ್ಶಿಸಲಿದ್ದು, ಬಳಿಕ ನಿರ್ಧಾರ ಕೈಗೊಳ್ಳಲಿದೆ. ಇದರೊಂದಿಗೆ ಯೋಜನೆಗೆ ಸಂಪುಟ ಸಮ್ಮತಿ, ಯೋಜನೆಯ ಅಂತಿಮ ರೂಪುರೋಷೆಗಳು, ಸಮಯ ನಿಗದಿಯನ್ನು ಮುಂದಿನ ತಿಂಗಳು ಮಾಡುವ ಸಾಧ್ಯತೆಇದೆ.
ಸದ್ಯದ ಅಂದಾಜಿನ ಪ್ರಕಾರ ಬುಲೆಟ್‌ ರೈಲು ಯೋಜನೆ 2017ರಲ್ಲಿ ಶುರುವಾಗಲಿದ್ದು, 2023ಕ್ಕೆ ಮುಕ್ತಾಯವಾಗಲಿದೆ. 2024ರ ವೇಳೆಗೆ ಇದು ಸಂಚಾರ ಆರಂಭಿಸಲಿದೆ. ಸುಮಾರು 40 ಸಾವಿರ ಮಂದಿಯ ನಿತ್ಯ ಪ್ರಯಾಣಕ್ಕೆ ಈ ರೈಲು ಸಹಾಯವಾಗಲಿದೆ ಎನ್ನಲಾಗಿದೆ. ಜೆಐಸಿಎ ಹೊರತಾಗಿ ಎಸ್‌ಎನ್‌ಎಫ್ಸಿ ಫ್ರಾನ್ಸ್‌ ಈ ಮಾರ್ಗದ ಸಾಧ್ಯತೆಗಳ ಬಗ್ಗೆ ಅಧ್ಯಯನ ನಡೆಸಿ ರೈಲ್ವೇ ಸಚಿವಾಲಯಕ್ಕೆ ವರದಿ ಸಲ್ಲಿಸಿತ್ತು.

ಕಾಲೇಜು ಸಹಪಾಠಿಯಿಂದ ಯುವತಿ ರೇಪ್‌, ವಿಡಿಯೋ, ಬ್ಲ್ಯಾಕ್‌ ಮೇಲ್‌

ಕಾನ್ಪುರ: ತನ್ನ ಕಾಲೇಜಿನ ಹಿರಿಯ ವಿದ್ಯಾರ್ಥಿಯೋರ್ವ ತನ್ನ ಮೇಲೆ ಅತ್ಯಾಚಾರ ನಡೆಸಿರುವನಲ್ಲದೆ ಆ ಲೈಂಗಿಕ ಕ್ರಿಯೆಯನ್ನು ವಿಡಿಯೋದಲ್ಲಿ ಚಿತ್ರೀಕರಿಸಿಕೊಂಡು ತನ್ನನ್ನು ಹಲವು ಬಾರಿ ರೇಪ್‌ ಮಾಡಿ ಬ್ಲ್ಯಾಕ್‌ ಮೇಲ್‌ ಮಾಡುತ್ತಿರುವುದಾಗಿ 25 ವರ್ಷ ಪ್ರಾಯದ ಎಂಬಿಎ ವಿದ್ಯಾರ್ಥಿನಿಯೋರ್ವಳು ಪೊಲೀಸರಿಗೆ ದೂರು ನೀಡಿದ್ದಾಳೆ.
ಅತ್ಯಾಚಾರ, ಬ್ಲ್ಯಾಕ್‌ ಮೇಲ್‌ ಗೆ ಗುರಿಯಾಗಿರುವ ವಿದ್ಯಾರ್ಥಿನಿಯು ಇಲ್ಲಿನ ಇಂದ್ರನಗರ ಪ್ರದೇಶದ ನಿವಾಸಿಯಾಗಿದ್ದು ಖಾಸಗಿ ಕಾಲೇಜಿನಲ್ಲಿ ಎಂಬಿಎ ಶಿಕ್ಷಣ ಪಡೆಯುತ್ತಿದ್ದಾಳೆ. ವರ್ಷದ ಹಿಂದೆ ಆಕೆಗೆ ಅಜಿತ್‌ ಸಿಂಗ್‌ ಎಂಬಾತನೊಂದಿಗೆ ಸ್ನೇಹವಾಗಿತ್ತು ಎಂದು ಕಲ್ಯಾಣಪುರ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಕಮಲ್‌ ಯಾದವ್‌ ತಿಳಿಸಿದ್ದಾರೆ.
ಅತ್ಯಾಚಾರ ಸಂತ್ರಸ್ತೆ ಕೊಟ್ಟಿರುವ ದೂರಿನ ಪ್ರಕಾರ ಆಕೆಯ ಹೇಳಿಕೆ ಹೀಗಿದೆ: ನನ್ನ ತಂದೆ ಕ್ಯಾನ್ಸರ್‌ ರೋಗಿಯಾಗಿದ್ದು ಆತನನ್ನು ಕೋಲ್ಕತಕ್ಕೆ ಚಿಕಿತ್ಸೆಗಾಗಿ ಮನೆಯವರು ಒಯ್ದಿದ್ದರು. ಆಗ ನಾನು ಸಂಬಂಧಿಕರ ಮನೆಯಲ್ಲಿ ಉಳಿದಿದ್ದೆ. ಆರೋಪಿ ಅಜಿತ್‌ ಸಿಂಗ್‌ ಯಾವುದೋ ಅಧ್ಯಯನ ಪಠ್ಯವನ್ನು ಕೊಡುವ ನೆಪದಲ್ಲಿ ಅಲ್ಲಿಗೆ ಬಂದಿದ್ದ. ಆ ಮನೆಯಲ್ಲಿ ಯಾರೂ ಇಲ್ಲದಿದ್ದ ಹೊತ್ತಿನಲ್ಲಿ ನನ್ನ ಮೇಲೆ ಲೈಂಗಿಕ ಹಲ್ಲೆ, ಅತ್ಯಾಚಾರ ನಡೆಸಿದ್ದಾನೆ. ಮಾತ್ರವಲ್ಲದೆ ಅದನ್ನು ವಿಡಿಯೋದಲ್ಲೂ ಚಿತ್ರೀಕರಿಸಿಕೊಂಡಿದ್ದಾನೆ.  ಆಧಾರದಲ್ಲಿ ಆತ ನನ್ನನ್ನು ಬ್ಲ್ಯಾಕ್‌ ಮೇಲ್‌ ಮಾಡಿ ಆ ಬಳಿಕ ಹಲವು ಬಾರಿ  ಅತ್ಯಾಚಾರ ಮಾಡಿದ್ದಾನೆ.
ಅತ್ಯಾಚಾರ ಸಂತ್ರಸ್ತೆಯು ತನ್ನ ಹೆತ್ತವರು ಕೋಲ್ಕತೆಯಿಂದ ನಗರಕ್ಕೆ ಮರಳಿದ ಬಳಿಕ ಪೊಲೀಸರಿಗೆ ತನ್ನ ಮೇಲಿನ ಅಕೃತ್ಯದ ಬಗ್ಗೆ ದೂರು ನೀಡಿದ್ದಾಳೆ. ಆರೋಪಿ ಅಜಿತ್‌ ಸಿಂಗ್‌, ಮಥುರಾ ಪೊಲೀಸ್‌ ಇನ್ಸ್‌ಪೆಕ್ಟರ್‌ ಮನೋಜ್‌ ಸಿಂಗ್‌ ಎಂಬಾತನ ಮಗನೆಂದು ಗೊತ್ತಾಗಿದೆ ಎಂಬುದಾಗಿ ಇನ್ಸ್‌ಪೆಕ್ಟರ್‌ ಯಾದವ್‌ ತಿಳಿಸಿದ್ದಾರೆ.
ಮೇಲ್ನೋಟಕ್ಕೆ ಇದೊಂದು ಪರಿತ್ಯಕ್ತ ಪ್ರಣಯ ಪ್ರಸಂಗವೆಂದು ತೋರಿಬರುತ್ತದೆ. ಆದರೂ ನಾವು ಯುವತಿಯ ದೂರಿನ ಪ್ರಕಾರ ಆರೋಪಿ ಅಜಿತ್‌ ಸಿಂಗ್‌ ವಿರುದ್ಧ ರೇಪ್‌ ಕೃತ್ಯದ ದೂರನ್ನು ದಾಖಲಿಸಿಕೊಂಡು ಆತನ ಬಂಧನಕ್ಕೆ ಜಾಲ ಬೀಸಿದ್ದೇವೆ ಎಂದು ಯಾದವ್‌ ಹೇಳಿದ್ದಾರೆ.

ಸಾಕ್ಷಿದಾರನಿಗೆ ಆಸಾರಾಂ ಲಂಚದ ಆಮಿಷ: ಪೊಲೀಸರಿಗೆ ಆಡಿಯೋ clp

image: http://www.udayavani.com/sites/default/files/styles/article_image/public/images/articles/2015/07/21/Asaram-bg.jpg?itok=No4QYSdD

ಬರೇಲಿ: ಸ್ವಯ ಘೋಷಿತ ದೇವಮಾನವ ಆಸಾರಾಂ ಬಾಪು ತನ್ನ ವಿರುದ್ಧದ ಅತ್ಯಾಚಾರ ಪ್ರಕರಣದ  ಸಾಕ್ಷಿದಾರನಿಗೆ ಲಂಚದ ಆಮಿಷ ಒಡ್ಡುವ ಆಡಿಯೋ ಕ್ಲಿಪ್‌ ಒಂದನ್ನು ಅತ್ಯಾಚಾರ ಸಂತ್ರಸ್ತೆಯ ತಂದೆ ಪೊಲೀಸರಿಗೆ ನೀಡಿದ್ದಾರೆ.
ಆಸಾರಾಂ ಬಾಪು ತನ್ನ ವಿರುದ್ಧದ ಪ್ರಮುಖ ಸಾಕ್ಷಿದಾರನಿಗೆ ಲಂಚ ಒಡ್ಡುವ ಈ ಆಡಿಯೋ ಕ್ಲಿಪ್ಪನ್ನು ಎಂಟು ತಿಂಗಳ ಹಿಂದೆಯೇ ದಾಖಲಿಸಿಕೊಳ್ಳಲಾಗಿತ್ತು. ಕಳೆದ ಜುಲೈ 10ರಂದು ಶಹಜಹಾನ್‌ಪುರದಲ್ಲಿ ಆಸಾರಾಂ ಬೆಂಬಲಿಗರಿಂದ ಹಲ್ಲೆಗೆ ಗುರಿಯಾಗಿ  ಮೃತಪಟ್ಟ ಜೋಧ್‌ಪುರ ಅತ್ಯಾಚಾರ ಪ್ರಕರಣದ ಪ್ರಮುಖ ಸಾಕ್ಷಿದಾರ ಕೃಪಾಳ್‌ ಸಿಂಗ್‌ ನಿಂದ ತಾನಿದನ್ನು ಪಡೆದುಕೊಂಡೆನೆಂದು ಅತ್ಯಾಚಾರ ಸಂತ್ರಸ್ತೆಯ ತಂದೆ ಪೊಲೀಸರಿಗೆ ತಿಳಿಸಿದ್ದಾರೆ ಎಂಬುದಾಗಿ ಶಹಜಹಾನ್‌ಪುರ ಪೊಲೀಸ್‌ ಸುಪರಿಂಟೆಂಡೆಂಟ್‌ ಬಬ್ಲೂ ಕುಮಾರ್‌ ಹೇಳಿದ್ದಾರೆ.
ಆಡಿಯೋ ಕ್ಲಿಪ್‌ ನ ಋಜುತ್ವವನ್ನು ಪರೀಕ್ಷಿಸಲಾಗುತ್ತಿದೆ. ಇದರಲ್ಲಿನ ಧ್ವನಿಯು ಆಸಾರಾಂ ಬಾಪುವಿನ ಈಗಾಗಲೇ ದಾಖಲಾಗಿರುವ ಧ್ವನಿಗೆ ತಾಳೆಯಾದ ಪಕ್ಷದಲ್ಲಿ ಇದನ್ನು ನ್ಯಾಯಾಲಯದಲ್ಲಿ ಪ್ರಮುಖ ಸಾಕ್ಷ್ಯವಾಗಿ ಬಳಸಿಕೊಳ್ಳಲಾಗುವುದು ಎಂದು ಎಸ್‌ಪಿ ಹೇಳಿದರು.
ಆಡಿಯೊ ಕ್ಲಿಪ್‌ ನಲ್ಲಿ ಆಸಾರಾಂ ಬಾಪು, ತನ್ನ ವಿರುದ್ಧದ ಅತ್ಯಾಚಾರ ಪ್ರಕರಣದ  ಸಾಕ್ಷಿದಾರನಿಗೆ, ಲಂಚದ ಶೇ.50ರಷ್ಟನ್ನು ಈಗಲೇ ನೀಡುವುದಾಗಿ ಉಳಿದರ್ಧವನ್ನು ಕೆಲಸ ಮುಗಿದಾಗ ನೀಡುವುದಾಗಿ ಹೇಳುವುದು ಕೇಳಿಬರುತ್ತಿದೆ ಎಂದು ಅತ್ಯಾಚಾರ ಸಂತ್ರಸ್ತೆಯ ತಂದೆ ಪೊಲೀಸರಿಗೆ ಹೇಳಿದ್ದಾರೆ.
ಸಾಕ್ಷಿದಾರನೊಂದಿಗಿನ ಈ ಸಂಭಾಷಣೆಯನ್ನು ಆಸಾರಾಂ ನಿಕಟವರ್ತಿಗಳಾಗಿರುವ ರಾಘವ ಮತು ಸಂಜಯ್‌ ವ್ಯವಸ್ಥೆಗೊಳಿಸಿದ್ದು ಈ ವ್ಯಕ್ತಿಗಳೇ ಜು.10ರಂದು ಕೃಪಾಳ್‌ ಸಿಂಗ್‌ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದವರಾಗಿದ್ದಾರೆ ಎಂದು ಅತ್ಯಾಚಾರ ಸಂತ್ರಸ್ತೆಯ ತಂದೆ ದೂರಿದ್ದಾರೆ